ಮೆಸ್ಕಾಂ ವೈಫಲ್ಯ ಖಂಡಿಸಿ ಪಂಜಿನ ಮೆರವಣಿಗೆಯೊಂದಿಗೆ ಪ್ರತಿಭಟನೆ

ಲೋಕಬಂಧು ನ್ಯೂಸ್ ಉಡುಪಿ
ಮೆಸ್ಕಾಂ ವೈಫಲ್ಯ ಖಂಡಿಸಿ ಬಿಜೆಪಿ ಉಡುಪಿ ನಗರ ವತಿಯಿಂದ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಜಾಥಾ ಬುಧವಾರ ಸಂಜೆ ಉಡುಪಿ ನಗರದಲ್ಲಿ ನಡೆಯಿತು.ನಗರದ ಬೋರ್ಡ್ ಹೈಸ್ಕೂಲ್ ಬಳಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಕೆ.ಎಂ.ಮಾರ್ಗವಾಗಿ ಸಾಗಿ ಡಯಾನಾ ಸರ್ಕಲ್‌ನಿಂದ ಮೆಸ್ಕಾಂ ಕಚೇರಿ ಬಳಿ ಸಮಾಪನಗೊಂಡಿತು.ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲೆಯಾದ್ಯಂತ ನಿರಂತರ ಪವರ್ ಕಟ್, ಲೋ ವೋಲ್ವೇಜ್ ಸಮಸ್ಯೆ, ವಿದ್ಯುತ್‌ ಕಣ್ಣಾಮುಚ್ಚಾಲೆ, ಟ್ರಾನ್ಸ್‌ಫಾರ್ಮ‌ರ್ ಕೊರತೆ, ಕಳಪೆ ನಿರ್ವಹಣೆ, ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮೊದಲಾದ ಸಮಸ್ಯೆಯಿಂದಾಗಿ ಜಿಲ್ಲೆಯ ಜನತೆ ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯ ಸರಕಾರ ತಕ್ಷಣ ಮೆಸ್ಕಾಂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ಜಿಲ್ಲೆಯ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.


ಪರೀಕ್ಷೆ ಸಮಯದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಬವಣೆ ಪಡುವಂತಾಗಿದೆ. ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ‌ ಮಾಡಬೇಕಾದೀತು ಎಂದು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಮುಖಂಡರಾದ ಮಟ್ಟಾರು ರತ್ನಾಕರ ಶೆಟ್ಟಿ, ಪ್ರಭಾಕರ ಪೂಜಾರಿ, ದಿನಕರ ಹೆರ್ಗ, ಸುಪ್ರಸಾದ್ ಶೆಟ್ಟಿ, ದಿನಕರ ಬಾಬು, ನಳಿನಿ ಪ್ರದೀಪ್, ಶ್ರೀಕಾಂತ ನಾಯಕ್, ಶಿವಕುಮಾರ್ ಅಂಬಲಪಾಡಿ ಮೊದಲಾದವರಿದ್ದರು.