ಲೋಕಬಂಧು ನ್ಯೂಸ್ ಮಣಿಪಾಲ
ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3182ರ ವಲಯ 4ರ ಸಾಂಸ್ಕೃತಿಕ ಸಮ್ಮಿಲನ ‘ರಂಗ್ ತರಂಗ್' ಕಾರ್ಯಕ್ರಮ ಅಕ್ಟೋಬರ್ 25ರಂದು ರೋಟರಿ ಕ್ಲಬ್ ಮಣಿಪಾಲ ಟೌನ್ ಆತಿಥ್ಯದಲ್ಲಿ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಿತು.ರೋಟರಿ ಜಿಲ್ಲೆ 3182ರ ಜಿಲ್ಲಾ ಕಾರ್ಯದರ್ಶಿ (ಕಾರ್ಯಕ್ರಮ ವಿಭಾಗ) ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ರೋಟರಿ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ಜೊತೆಗೆ ಪರಸ್ಪರ ಒಡನಾಟ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ ಎಂದರು.
ವಲಯ 4ರ ಸಹಾಯಕ ಗವರ್ನರ್, ಮೇಜರ್ ಡೋನರ್ ಹೇಮಂತ್ ಯು.ಕಾಂತ್ ಮಾತನಾಡಿ, ವಿವಿಧ ತಂಡಗಳು ಕೇವಲ ಸ್ಪರ್ಧೆ ಅಥವಾ ಬಹುಮಾನಗಳ ದೃಷ್ಟಿಯಿಂದ ಮಾತ್ರವಲ್ಲದೆ ಪ್ರೀತಿಯಿಂದ ತಮ್ಮ ಪ್ರತಿಭೆಯನ್ನು ವಲಯದ ರೋಟರಿ ಸದಸ್ಯರ ಮುಂದೆ ಅನಾವರಣಗೊಳಿಸುತ್ತಿರುವುದು ಸಂತಸದ ಸಂಗತಿ ಎಂದರು.
ದಿನವಿಡೀ ನಡೆದ ಸಾಂಸ್ಕೃತಿಕ ಸಮ್ಮಿಲನದಲ್ಲಿ ಚಿತ್ರಗೀತೆ ಗಾಯನ (ಪುರುಷರು ಮತ್ತು ಮಹಿಳೆಯರ ವಿಭಾಗ), ಏಕಪಾತ್ರಾಭಿನಯ, ಯುಗಳ ಗೀತೆ, ವೃಂದಗಾಯನ, ಸಮೂಹ ನೃತ್ಯ ಹಾಗೂ ಕಿರು ನಾಟಕ ಸೇರಿದಂತೆ ಏಳು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಲಯ 4ರ ಎಲ್ಲ ಎಂಟು ರೋಟರಿ ಕ್ಲಬ್ಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದವು.
ಸಂಜೆ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ರೋಟರಿ ಕ್ಲಬ್ ಉಡುಪಿ ತಂಡಗಳು ಜಂಟಿಯಾಗಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದರೆ, ರೋಟರಿ ಕ್ಲಬ್ ಐಸಿರಿ ಪರ್ಕಳ ಸಮಗ್ರ ಚಾಂಪಿಯನ್ - ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಡಾ. ನವೀನಕುಮಾರ್ ಕೂಡಮರ ಅಧ್ಯಕ್ಷತೆ ವಹಿಸಿದ್ದರು. ವಲಯ ಸಂಯೋಜಕ ಡಾ. ದೀಪಕ್ ರಾಮ್ ಬಾಯಿರಿ ಸ್ವಾಗತಿಸಿದರು. ಕಾರ್ಯದರ್ಶಿ ಸಮರೇಂದ್ರನಾಥ್ ಭಟ್ಟಾಚಾರ್ಯ ವಂದಿಸಿದರು.
ಝೋನಲ್ ಲರ್ನಿಂಗ್ ಫೆಸಿಲಿಟೇಟರ್ ದಯಾನಂದ ಶೆಟ್ಟಿ, ವಲಯ ಕಾರ್ಯದರ್ಶಿ ಗುರುರಾಜ ಭಟ್ ಟಿ. ಹಾಗೂ ವಲಯ ಸೇನಾನಿಗಳಾದ ನಿತ್ಯಾನಂದ ನಾಯಕ್ ಮತ್ತು ದೀಕ್ಷಿತ್ ಶೆಟ್ಟಿ ವೇದಿಕೆಯಲ್ಲಿದ್ದರು.