ಲೋಕಬಂಧು ನ್ಯೂಸ್ | ಉಡುಪಿ, ಮೇ 21
ನಗರದ ತಾಲೂಕು ಕಚೇರಿ ಬಳಿಯ ಡಾ.ಟಿಎಂಎ ಪೈ ಆಸ್ಪತ್ರೆ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಜೂ.1ರಿಂದ ಕಾರ್ಯಾರಂಭ ಮಾಡಲಿದೆ. ಮೇ 22ರಿಂದ 24ರ ವರೆಗೆ ಬೆಳಿಗ್ಗೆ 10ರಿಂದ ಅಪರಾಹ್ನ 4ರ ವರೆಗೆ ಆಸ್ಪತ್ರೆಗೆ ಮುಕ್ತ ಭೇಟಿ ಮತ್ತು ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 1984ರಲ್ಲಿ ಸ್ಥಾಪನೆಯಾದ ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ ಮತ್ತು ಪರಿಸರದ ಜನರಿಗೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ಇದೀಗ ವಿಶಾಲವಾದ ಮತ್ತು ಆಧುನಿಕ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳುತ್ತಿದ್ದು 1.4 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಸುಧಾರಿತ ಮೂಲಸೌಕರ್ಯ, ಆಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ರೋಗಿ ಸ್ನೇಹಿ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
152 ಹಾಸಿಗೆಗಳ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಕಿವಿ ಗಂಟಲು ಮೂಗು, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ನೇತ್ರಶಾಸ್ತ್ರ, ಮನೋವೈದ್ಯಶಾಸ್ತ್ರ, ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಾಟಾಲಜಿ, ಗ್ಯಾಸ್ಟ್ರೋ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಅರಿವಳಿಕೆ ಶಾಸ್ತ್ರ, ಚರ್ಮಶಾಸ್ತ್ರ, ಔದ್ಯೋಗಿಕ ಚಿಕಿತ್ಸೆ, ರೆಸ್ಪಿರೇಟರಿ ಚಿಕಿತ್ಸೆ, ದಂತವೈದ್ಯಶಾಸ್ತ್ರ, ಫಿಸಿಯೋಥೆರಪಿ, ವಾಕ್ ಮತ್ತು ಶ್ರವಣ ವಿಭಾಗಗಳಿವೆ. ಅಲ್ಲದೇ ಹೃದ್ರೋಗ, ನರವಿಜ್ಞಾನ, ಮೂತ್ರಪಿಂಡಶಾಸ್ತ್ರ, ಸರ್ಜಿಕಲ್ ಆಂಕೊಲಾಜಿ, ವೈದ್ಯಕೀಯ ಆಂಕೊಲಾಜಿ, ನರ ಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ ಸಾಂಕ್ರಾಮಿಕ ರೋಗಗಳು, ಮಕ್ಕಳ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ರೆಸ್ಪಿರೇಟರಿ ಮೆಡಿಸಿನ್ ಮತ್ತು ಇತರ ಸೂಪರ್-ಸ್ಪೆಷಾಲಿಟಿಗಳಲ್ಲಿ ತಜ್ಞರ ಸಮಾಲೋಚನೆಗಳೂ ಲಭ್ಯ ಇರುತ್ತವೆ.
ದಿನದ 24 ಗಂಟೆಯೂ ತುರ್ತು ಚಿಕಿತ್ಸೆ ಮತ್ತು ಅಪಘಾತ ಆರೈಕೆ ಕೇಂದ್ರ, ಸುಧಾರಿತ ಲ್ಯಾಪರೊಸ್ಕೋಪಿಕ್ ವ್ಯವಸ್ಥೆಗಳೊಂದಿಗೆ ನಾಲ್ಕು ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, ವಿಸ್ತೃತ 25 ಹಾಸಿಗೆಗಳ ಐಸಿಯು ಸೌಲಭ್ಯ, ಸುಧಾರಿತ ಡಯಾಲಿಸಿಸ್ ಕೇಂದ್ರ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್, ಎಕ್ಸ್-ರೇ, ಪ್ರಯೋಗಾಲಯ ಮತ್ತು ಔಷಧಾಲಯ ಸೇವೆಗಳು, ವಿಶೇಷವಾಗಿ ವಿನ್ಯಾಸಗೊಳಿಸಿದ ಆರೋಗ್ಯ ತಪಾಸಣೆ ಸೌಲಭ್ಯ, ಡೇ ಕೇರ್ ಸೇವೆ ಹೊಂದಿದೆ ಎಂದರು.
ರೋಗಿಗಳ ಸುರಕ್ಷತೆ, ಗುಣಮಟ್ಟದ ಆರೈಕೆ, ಅವಶ್ಯ ಸೌಕರ್ಯ, ವೈದ್ಯರಿಗೆ ದಕ್ಷ ನಿರ್ವಹಣಾ ವ್ಯವಸ್ಥೆಗಳಿಗೆ ಒತ್ತುನೀಡುವ ಮೂಲಕ ಹೊಸ ಆಸ್ಪತ್ರೆಯನ್ನು ವಿನ್ಯಾಸಗೊಳಿಸಲಾಗಿದೆ. ನಿರ್ಣಾಯಕ ಆರೈಕೆ ಸೇವೆಗಳು, ಶಸ್ತ್ರಚಿಕಿತ್ಸಾ ಕೊಠಡಿಗಳು, ರೋಗಿಗಳ ಕಾಯುವ ಪ್ರದೇಶಗಳು, ವಿಶಾಲ ಪಾರ್ಕಿಂಗ್ ಸೌಲಭ್ಯ ಮತ್ತು ತಡೆಗಟ್ಟುವ ಆರೋಗ್ಯ ಸೇವೆಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮುಖ್ಯಸ್ಥ ಮತ್ತು ಗ್ರೂಪ್ ಮ್ಯಾನೇಜರ್ ದೀಪಕ್ ಪ್ರಭು ಹೇಳಿದರು.
ಉಪ ವೈದ್ಯಕೀಯ ಅಧೀಕ್ಷಕ ಡಾ.ರಾಜಾರಾಮ್ ಪೈ, ಕೆಎಂಸಿ ಮಣಿಪಾಲ ಮಾರ್ಕೆಟಿಂಗ್ ಹೆಡ್ ಮೋಹನ ಶೆಟ್ಟಿ ಮೊದಲಾದವರಿದ್ದರು.