ಲೋಕಬಂಧು ನ್ಯೂಸ್ | ಉಡುಪಿ, ಮೇ 20
ಮಣಿಪಾಲ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಕಳೆದ ವಾರ ನಡೆದಿದ್ದ ಯುವತಿಯ ಕೊಲೆ ಯತ್ನ ಪ್ರಕರಣವನ್ನು ಬೇಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ವಾಗ್ಲೆ ಸ್ಟೋರ್ ಬಳಿಯ ಮಹಿಳಾ ಪಿಜಿಯಲ್ಲಿ ವಾಸವಿದ್ದ ಅಂಕೋಲಾ ಮೂಲದ ಯೋಗಿತಾ ಎಂಬಾಕೆಯ ಕೊಲೆ ಯತ್ನ ನಡೆದಿತ್ತು. ಪಿಜಿಯಲ್ಲಿ ಒಬ್ಬಳೇ ಮಲಗಿದ್ದ ಯೋಗಿತಾಳ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಅಲ್ಲದೆ, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಮಣಿಪಾಲ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರ ತಂಡ ಇದೀಗ ಯುವತಿಯೊಬ್ಬಳನ್ನು ವಶಕ್ಕೆ ಪಡೆದಿದ್ದಾರೆ. ಯೋಗಿತಾ ವಾಸವಿದ್ದ ಪಿಜಿಯ ಇನ್ನೊಂದು ರೂಮಿನಲ್ಲಿ ವಾಸವಿದ್ದ ಯುವತಿ ಸುಷ್ಮಾ ನಾಯ್ಕ (30) ಬಂಧಿತ ಯುವತಿ.
ಆರೋಪಿ ಸುಷ್ಮಾ ನಾಯ್ಕ ಒಬ್ಬಳೇ ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ತಪ್ರೊಪ್ಪಿಕೊಂಡಿದ್ದಾಳೆ. ಬಂಧಿತಳಿಂದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ.
ಯುವತಿ ಯೋಗಿತಾ ಹಾಗೂ ಸುಷ್ಮಾ ನಾಯ್ಕ ಅಕ್ಕಪಕ್ಕದ ರೂಮಿನವರು. ಯೋಗಿತಾ ರೂಮಿನಲ್ಲೇ ಆರೋಪಿ ಸುಷ್ಮಾ ಮೇ 12ರಂದು ಮಲಗಿದ್ದು, ಮಧ್ಯರಾತ್ರಿ ವರೆಗೂ ಪೋನಿನಲ್ಲಿ ಮಾತನಾಡುತ್ತಿದ್ದ ಸುಷ್ಮಾ, ಯೋಗೀತಾ ನಿದ್ದೆಗೆ ಜಾರುವುದನ್ನೇ ಹೊಂಚುಹಾಕಿ ಕುಳಿತಿದ್ದಳು. ಬೆಳಗ್ಗಿನ ಜಾವ ಯೋಗಿತಾ ಗಾಢ ನಿದ್ದೆಗೆ ಜಾರಿರುವುದನ್ನು ಖಾತ್ರಿಪಡಿಸಿಕೊಂಡ ಆರೋಪಿ ಸುಷ್ಮಾ ಮೊದಲೇ ರೂಮಿನ ಹೊರಗಡೆ ತಂದಿಟ್ಟಿದ್ದ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಹಾಕಿದ್ದಳು. ಬಳಿಕ ಯೋಗಿತಾಳ ಕಿವಿಯೋಲೆ ಹಾಗೂ ಚಿನ್ನದ ಸರವನ್ನು ಕಸಿದು ತನ್ನ ರೂಮಿಗೆ ತೆರಳಿ ಮಲಗಿದ್ದಳು.
ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದ ಸ್ನೇಹಿತೆಯರು ಬಂದಾಗ ರಕ್ತದ ಮಡುವಿನಲ್ಲಿದ್ದ ಯೋಗಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಯೋಗಿತಾಳಿಗೆ ಚಿಕಿತ್ಸೆ ಇನ್ನೂ ಮುಂದುವರಿದಿದೆ.
ತನಿಖೆ ಕೈಗೆತ್ತಿಕೊಂಡಿದ್ದ ಮಣಿಪಾಲ ಠಾಣಾ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಕರಣ ಬೇಧಿಸಿದ್ದಾರೆ.
ಆರೋಪಿ ಸುಷ್ಮಾ ಹಲವು ದಿನಗಳಿಂದ ಯೋಗಿತಾಳ ಕೊಲೆಗೆ ಸ್ಕೆಚ್ ಹಾಕಿದ್ದಳು. ಅಲ್ಲದೆ, ಆನ್‌ಲೈನ್'ನಲ್ಲಿ ಚಾಕು ಕೂಡಾ ತರಿಸಿದ್ದಳು. ಯೋಗಿತಾ ಒಬ್ಬಳೇ ಇರುವುದಕ್ಕಾಗಿ ಸಂಚು ರೂಪಿಸಿ ಕೊಲೆಗೆ ಯತ್ನಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಮಣಿಪಾಲ ಪೋಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಬಿ ಎನ್. ಮತ್ತು ಪಿಎಸ್ ಐ ಶಂಭುಲಿಂಗಯ್ಯ ಹಾಗೂ ಠಾಣಾ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ವಿವೇಕ್, ಚೇತನ್, ಅಜ್ಜಲ್, ರವಿರಾಜ್, ಮಂಜುನಾಥ್, ಉಡುಪಿ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಜೀವನ್, ಪ್ರಸನ್ನ, ಮಲ್ಲಯ್ಯ ಹೇಮಂತ್ ಹಾಗೂ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ನೆರವಿನೊಂದಿಗೆ ಕಾರ್ಯಾಚರಣೆ ನಡೆದಿದೆ.
ಆರೋಪಿ ಸುಷ್ಮಾ ನಾಯ್ಕ ಉತ್ತರ ಕನ್ನಡ ಜಿಲ್ಲೆಯವಳಾಗಿದ್ದು ವಿಚ್ಛೇದಿತೆ. ಗಂಡನಿಗೆ ವಿಚ್ಛೇದನ ನೀಡಿದ ಬಳಿಕ ಮಣಿಪಾಲದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಾಗಿ ಬಂದಿದ್ದಳು. ಕುಡಿತದ ಚಟ ಅಂಟಿಸಿಕೊಂಡಿದ್ದ ಸುಷ್ಮಾ ತನ್ನ ಪ್ರಿಯಕರನೊಂದಿಗೆ ಸೇರಿ ಕುಡಿಯುತ್ತಿದ್ದಳು. ಅಲ್ಲದೆ, ಹಣದ ವ್ಯವಹಾರದಲ್ಲಿ ತೊಡಗಿ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಳು. ಹಾಗಾಗಿ ಚಿನ್ನದ ಸರಕ್ಕಾಗಿಯೇ ಕೊಲೆಗೆ ಯತ್ನಿಸಿದ್ದಾಳೆ ಎನ್ನುವುದು ತನಿಖೆಯಿಂದ ಬಯಲಾಗಿದೆ.
ಪೊಲೀಸರು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
